ಮಾನವತಾವಾದ - 
ಮಾನವನೇ ಶ್ರೇಷ್ಠ ಹಾಗೂ ಎಲ್ಲಕ್ಕೂ ಮೂಲ ಮತ್ತು ಹಿರಿದಾದವನು. ಎಂಬ ತತ್ತ್ವವನ್ನೊಳಗೊಂಡ ಒಂದು ಸಿದ್ಧಾಂತ (ಹ್ಯೂಮನಿಸಮ್). ಮಾನವತಾವಾದಿಗಳಿಗೆ ಧರ್ಮ ಬಹುಮುಖ್ಯವೆನಿಸುವುದಿಲ್ಲವಾದರೂ ಅವರಲ್ಲಿ ಧರ್ಮಾವಲಂಬಿಗಳೂ ಧರ್ಮರಹಿತರೂ ಇದ್ದಾರೆ. ಮಾನವನೆ ಮಾನವತಾವಾದಿಗಳಿಗೆ ಕೇಂದ್ರಬಿಂದು. ನಾನೊಬ್ಬ ಮಾನವ, ಯಾರೇ ಒಬ್ಬ ಮಾನವ ವ್ಯಕ್ತಿ ನನಗೆ ಪರಕೀಯನಲ್ಲ ಅಂದರೆ ಮಾನವರೆಲ್ಲ ಒಂದೇ ಎಂದು ಸುಮಾರು 2000 ವರ್ಷಗಳ ಹಿಂದೆಯೇ ಲ್ಯಾಟಿನ್ ಲೇಖಕ ಟೆರೆನ್ಸ್ (ಕ್ರಿ.ಪೂ. 185-159) ಹೇಳಿದ್ದಾನೆ. ಪ್ರತಿಯೊಬ್ಬ ಮಾನವರಿಗೂ ಅವರದೇ ಆದ ಗೌರವವನ್ನು ಬಯಸುತ್ತಾರೆ-ಅಂದರೆ ಮಾನವತಾವಾದದ ಪ್ರಕಾರ ಎಲ್ಲ ಮಾನವರೂ ಗೌರವಾದರಕ್ಕೆ ಪಾತ್ರರಾದವರು.

ಪ್ರಾಚೀನ ಗ್ರೀಕ್ ಮತ್ತು ರೋಮನ್ನರ ಜೀವನ ಮತ್ತು ತತ್ತ್ವಗಳಲ್ಲಿ ಮಾನವತಾವಾದದ ಮೂಲವನ್ನು ಕಂಡರೂ 1300 ರಿಂದ 1300ರವರೆಗೂ ಯೂರೋಪಿನಲ್ಲಿ ಒಂದು ಐತಿಹಾಸಿಕ ಚಳುವಳಿಯಾಗಿ ಇದು ಬೆಳೆಯಿತು. ಸಂಸ್ಕøತಿಯ ಪುನರುಜ್ಜೀವನವೆಂದು ಹೆಸರಾದ ಈ ಚಳುವಳಿಯ ಮುಖ್ಯ ಕೇಂದ್ರಬಿಂದು ಮಾನವನ್ನೇ ಕುರಿತದ್ದಾಗಿತ್ತು ಜೀವನದ ಬಗ್ಗೆ ಆಗ ಪ್ರಾರಂಭವಾದ ಮಾನವತಾದೃಷ್ಟಿ ಇಂದಿಗೂ ಮುಂದುವರಿದು ಬಂದಿದೆ.

ಮಾನವತಾವಾದದ ಚಳುವಳಿ ಪುನರುಜ್ಜೀವನದ ಕಾಲದ ಪ್ರಥಮದಲ್ಲಿ ಪ್ರಾಚೀನ ಗ್ರೀಕ್ ಮತ್ತು ರೋಮನ್ನರ ಬರಹಗಳನ್ನು ಮರು ಪತ್ತೆ ಹಚ್ಚುವುದರೊಂದಿಗೆ ಪ್ರಾರಂಭವಾಯಿತು. ಪ್ರಾಚೀನ ಗ್ರೀಕ್ ಮತ್ತು ರೋಮನ್ನರ ಕೃತಿಗಳು ಉತ್ತಮ ಸಾಹಿತ್ಯ ಶೈಲಿಯ ಮಾದರಿಗಳಾಗಿದ್ದುದಲ್ಲದೆ ಅವು ಜೀವನವನ್ನು ಅರಿತುಕೊಳ್ಳಲು ಮಾರ್ಗದರ್ಶಕಗಳಾಗಿಯೂ ಇದ್ದುದರಿಂದ ಮಾನವತಾವಾದಿಗಳ ಹೆಚ್ಚು ಆದರಕ್ಕೆ ಪಾತ್ರವಾದವು. ಮಧ್ಯಯುಗದ ಅನೇಕ ವಿದ್ವಾಂಸರು ಈ ಭೂಮಿ ಮೇಲಿನ ಜೀವನವನ್ನು ಕಡೆಗಣಿಸಿದ್ದಲ್ಲದೆ ಮಾನವ ಕನಿಷ್ಠಪ್ರಾಣಿ ಆತ ಸ್ವರ್ಗಪ್ರಾಪ್ತಿಗೆ ತನ್ನ ಜೀವನವನ್ನೇ ಮುಡುಪಿಡಬೇಕು ಎಂದು ಬೋಧಿಸಿದ್ದನ್ನು ಮಾನವತಾವಾದಿಗಳು ಸಂಪೂರ್ಣವಾಗಿ ಅಲ್ಲಗಳೆದದ್ದಲ್ಲದೆ ಮಾನವತ್ತ್ವದ ಹಿರಿಮೆಯತ್ತ ಜನರ ಗಮನ ಸೆಳೆದರು. 1300ರಲ್ಲಿ ಇಟಲಿಯಲ್ಲಿ ಪ್ರಾರಂಭವಾದ ಮಾನವತಾವಾದಿಗಳ ಚಳುವಳಿ ಫ್ರಾನ್ಸ್, ಜರ್ಮನಿ. ನೆದರ್ಲೆಂಡ್ ಮತ್ತು ಇಂಗ್ಲೆಂಡ್‍ಗಳಿಗೆ ಹರಡಿತಲ್ಲದೆ 1500ರ ವೇಳೆಗೆ ಮಾನವತಾವಾದ ಅಂತಾರಾಷ್ಟ್ರೀಯ ವಿದ್ವಾಂಸರ ಸಾಹಚರ್ಯವಾಗಿತ್ತು.

ಪಶ್ಚಿಮ ಸಂಸ್ಕøತಿಯ ಹೆಚ್ಚಿನ ಪಾಲು ಮಾನವತಾವಾದದ ಫಲವೇ ಆಗಿದೆ. ಮಾನವತಾವಾದದ ತತ್ತ್ವ ಮತ್ತು ಅದರ ಗುರಿ ಇಂದಿಗೂ ಕಲೆ, ಶಿಕ್ಷಣ ಮತ್ತು ಸರ್ಕಾರಗಳ ಮೇಲೆ ಪ್ರಭಾವ ಬೀರುತ್ತದೆ.

ಕಲೆ ಕುರಿತಾಗಿ ಹೇಳುವುದಾದರೆ-ಮೊದಲಿನ ಮಾನವತಾವಾದಿಗಳಲ್ಲಿ ಹೆಚ್ಚು ಮಂದಿ ಧರ್ಮಾವಲಂಬಿಗಳಾಗಿದ್ದರು. ಈ ಜಗತ್ತು ಮಿಥ್ಯ, ಇದರ ಸುಖಸಂತೋಷಗಳನ್ನು ತ್ಯಜಿಸಬೇಕೆಂಬ ಮಧ್ಯಯುಗದ ಬೋಧನೆಯನ್ನು ಮಾನವತಾವಾದಿಗಳು ಖಂಡಿಸಿದ್ದಲ್ಲದೆ ಮಾನವನ ಅಸ್ತಿತ್ವದ ನಿಜಸ್ವರೂಪದ ಅರಿವನ್ನುಂಟುಮಾಡಿದರು. ಮಾನವತಾವಾದಿಗಳ ಸಾಹಿತ್ಯ ಸತ್ಯ. ವಿಮರ್ಶೆ ಹಾಗೂ ಹಾಸ್ಯದಿಂದ ಕೂಡಿದ್ದು. ಇದಕ್ಕೆ ಇಟಲಿಯ ಪೆಟ್ರಾರ್ಕ್ (1304-1374), ಮಾನವತಾವಾದಿ ಹಾಲೆಂಡಿನ ಎರಾಸ್ಮಸ್ (1466-1536), ಇಂಗ್ಲೆಂಡಿನ ಜೆಫ್ರಿ ಚಾಸರ್ (1340-1400) ಇಟಲಿಯ ಬೊಕಾಸಿಯೋ ಗಿಯೋವನ್ನಿ (1313-1375) ಫ್ರಾನ್ಸಿನ ರಬೆಲ್ಲೆ, ಫ್ರಾಂಕಾಯ್ (1494-1553), ಇಂಗ್ಲೆಂಡಿನ ಸರ್ ತಾಮಸ್ ಮೋರ್ (1478-1535) ಮುಂತಾದ ಮಾನವತಾವಾದಿಗಳ ಸಾಹಿತ್ಯವನ್ನು ಉದಾಹರಿಸುತ್ತಾರೆ.

ಇದೇ ಕಾಲದಲ್ಲಿ ಮೂಡಿಬಂದ ಚಿತ್ರಕಲೆ, ಶಿಲ್ಪಕಲೆಗಳೂ ಕೂಡ ಮೊದಮೊದಲು ಧರ್ಮವನ್ನೇ ಒಳಗೊಂಡಿದ್ದು ಬರಬರುತ್ತ ಸಂಪೂರ್ಣ ಮಾನವತಾ ತತ್ತ್ವಗಳಿಗೆ ತಿರುಗುವುದು ಕಂಡುಬರುತ್ತದೆ. ಹಾಗೇ ಇಂದಿನ ಧರ್ಮ ತತ್ತ್ವಶಾಸ್ತ್ರ, ಭಾಷೆ ಮತ್ತು ಸಾಹಿತ್ಯ, ಇತಿಹಾಸ ಮತ್ತು ಕಲೆಗಳನ್ನೊಳಗೊಂಡ ಶಿಕ್ಷಣ ಸಂಪೂರ್ಣ ಮಾನವತಾವಾದದಿಂದಲೇ ಕೂಡಿದ್ದು ಮಾನವ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುತ್ತವೆ.

ರಾಜಕೀಯದಲ್ಲೂ ಮಾನವತಾವಾದಿಗಳು ಬೀರಿದ ಪ್ರಭಾವ ಮಹತ್ತ್ವವಾದದ್ದು. ರಾಜಕೀಯ ದಬ್ಬಾಳಿಕೆ, ನಿರಂಕುಶಾಧಿಕಾರ ಇವುಗಳಿಗೆ ಎದುರಾಗಿನಿಂತ ಮಾನವತಾವಾದವೇ ಅಮೆರಿಕ ಮತ್ತು ಫ್ರಾನ್ಸಿನ ಕ್ರಾಂತಿಗಳಿಗೆ ಕಾರಣವೆನ್ನಬಹುದು. ಅಮೆರಿಕದ ಸ್ವಾತಂತ್ರ್ಯ ಘೋಷಣೆ ಹಾಗೇ ಫ್ರಾನ್ಸಿನ ಮಾನವ ಹಕ್ಕುಗಳ ಘೋಷಣೆಗಳೆರಡೂ ಮಾನವನ ಗೌರವವನ್ನು ಎತ್ತಿ ಹಿಡಿದಿವೆ. ತಾಮಸ್ ಜೆಫರ್‍ಸನ್, ಬೆಂಜಮಿನ್ ಫ್ರಾಂಕ್ಲಿನ್ ಆಗಿನ ಪ್ರಸಿದ್ಧ ಮಾನವತಾವಾದಿಗಳೆನಿಸಿದ್ದಾರೆ.

ಇಂದು ವಿಜ್ಞಾನ ಮತ್ತು ಯಂತ್ರಜ್ಞಾನ ವಿಶೇಷವಾಗಿ ಬೆಳೆದು ನಿಂತಿವೆ. ಇವು ಇಡೀ ಮಾನವತ್ತ್ವಕ್ಕೇ ಭಾರೀ ಸವಾಲಾಗಿ ಪರಿಣಮಿಸಿವೆ. ವಿಜ್ಞಾನ ಮಾನವನ ಜ್ಞಾನ, ಶಕ್ತಿ ಇವುಗಳನ್ನು ಭಾರೀ ಸವಾಲಾಗಿ ಪರಿಣಮಿಸಿವೆ. ವಿಜ್ಞಾನ ಮಾನವನ ಜ್ಞಾನ, ಶಕ್ತಿ ಇವುಗಳನ್ನು ಹೆಚ್ಚಿಸಿರುವುದರ ಜೊತೆಗೆ ಇಂದು ಮಾನವನನ್ನು ಸರ್ವನಾಶದ ಅಂಚಿನಲ್ಲಿ ನಿಲ್ಲಿಸಿದೆ. ಆದ್ದರಿಂದ ಮಾನವತಾವಾದದ ಅಗತ್ಯ ಇಂದು ಎಲ್ಲ ಕಾಲಕ್ಕಿಂತಲೂ ಹೆಚ್ಚಾಗಿದೆ. ಈ ಶಕ್ತಿಗಳನ್ನು ಮಾನವ ಕಲ್ಯಾಣಕ್ಕೆ ಉಪಕಾಲಕ್ಕಿಂತಲೂ ಹೆಚ್ಚಾಗಿದೆ. ಈ ಶಕ್ತಿಗಳನ್ನು ಮಾನವ ಕಲ್ಯಾಣಕ್ಕೆ ಉಪಯೋಗಿಸುವುದನ್ನೂ-ಮಾನವ ರಕ್ಷಣೆಯನ್ನೂ ಇಂದು ಮಾನವತಾವಾದ ಮಾಡಬೇಕಾಗಿದೆ ಎಂಬುದು ಎಲ್ಲ ಶಿಕ್ಷಣ ತಜ್ಞರ ವಿಜ್ಞಾನಿಗಳ ಮತ್ತು ಜ್ಞಾನಿಗಳ ಅಭಿಪ್ರಾಯವಾಗಿದೆ.

ಭಾರತದಲ್ಲಿ ಮಾನವತಾವಾದಿಗಳನ್ನು ನಾವು ಋಷಿ ಮುನಿಗಳ ಕಾಲದಿಂದ ಮಹಾತ್ಮ ಗಾಂಧಿಯವರೆಗೂ ಗುರುತಿಸಬಹುದಾಗಿದೆ. ಮಾನವನ ಹಿರಿಮೆಯನ್ನು ಎತ್ತಿಹಿಡಿದು ಮಾನವತನಕ್ಕೆ ಹೆಚ್ಚು ಗೌರವ ತೋರಿದ ದೇಶಗಳಲ್ಲಿ ಭಾರತವೂ ಒಂದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ